ಶನಿವಾರ, ಜುಲೈ 8, 2023

ಗಿಳಿಯು ಮಾತನಾಡುವುದಿಲ್ಲ!

ನನಗೆ ಸ್ಪಷ್ಟವಾಗಿ ನೆನಪಿದೆ. ಅಮ್ಮ ಅಷ್ಟು ಗೋಳಾಡಿದ್ದನ್ನು ಅದುವರೆಗೆ ನಾನೆಂದೂ ನೋಡಿದ್ದಿಲ್ಲ. ಅದೂ ಕೇವಲ ಒಂದು ಸಣ್ಣ ಹಕ್ಕಿಗೋಸ್ಕರ! ಅಂದು ಪಕ್ಕದ ಬೀದಿ ಕೆಂಪಣ್ಣನ ಹೆಂಡತಿಯೊಡನೆ ಆಡಿದ ಜಗಳ ಅವಳನ್ನು ತೀವ್ರವಾಗಿ ಕಾಡಿಬಿಟ್ಟಿತ್ತೇನೋ?  ನಾನು ಗಮನಿಸಿದ ಹಾಗೆ ಅಮ್ಮ ಆ ಪುಟ್ಟ ಗಿಳಿಯನ್ನು ನಮ್ಮಷ್ಟು ಹಚ್ಚಿಕೊಂಡಿರಲಿಲ್ಲ. ಮುಂದೊಂದು ದಿನ ಮನೆಯ ಹೊಸ್ತಿಲ ಮೇಲೆ ಕೂತಿದ್ದ ಅದನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋದಾಗಲೂ ಇಷ್ಟೇ ಅದರ ಆಯಸ್ಸಿದ್ದದ್ದು!” ಎಂದು ತಾತ್ವಿಕ ನುಡಿಯನ್ನಾಡಿ ಒಂದು ದೊಡ್ಡ ನಿಟ್ಟುಸಿರುಬಿಟ್ಟು ಸುಮ್ಮನಾದಳೇ ಹೊರತು ಗೋಳಾಡಿರಲಿಲ್ಲ. ಅಮ್ಮನಿಗೆ ಜಗಳ ಹೊಸದೇನೂ ಆಗಿರಲಿಲ್ಲ. ಮನೆಯಲ್ಲಿ ಮುಂಗೋಪಿ ಅಪ್ಪನೊಂದಿಗೋ, ಏನೇನೋ ಕಾರಣಗಳಿಗೆ ಪಕ್ಕದ ಮನೆಯ ಮಂಗಮ್ಮನ ಜೊತೆಗೋ ಇಲ್ಲವೇ ಸಂತೆಯಲ್ಲಿ ತನ್ನ ತರಕಾರಿ ಅಂಗಡಿಯ ಮಂಕರಿಯ ಜಾಗವನ್ನು ಒತ್ತರಿಸಿಕೊಂಡು ಬರುತ್ತಿದ್ದ ಪಕ್ಕದಂಗಡಿಯ ಸ್ವಂತ ನಾದಿನಿಯರ ಜೊತೆಗೋ ಕಿತ್ತಾಡಿದ್ದನ್ನು ನೋಡಿದ್ದೇನೆ. ಆದರೆ ಇಂದಿನ ಜಗಳದ ವಿಷಯ ಅವಳನ್ನು ತುಂಬಾ ಕಲಕಿಬಿಟ್ಟಿತ್ತು ಎನ್ನುವುದೇ ನನಗೂ ಅರಗಿಸಿಕೊಳ್ಳಲಾಗದೇ ಇದ್ದ ವಿಷಯ!  

ಅದು ಎಂಭತ್ತರ ದಶಕ. ಅತ್ತ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪರಿಸರದ ಬೀದಿ. ಸ್ಲಮ್ಮಿಗಿಂತ ಸ್ವಲ್ಪ ಪರವಾಗಿಲ್ಲ ಎನ್ನುವಷ್ಟು ಶ್ರೀಮಂತಿಕೆ. ೨೦ರೂಪಾಯಿ ತಿಂಗಳ ಬಾಡಿಗೆ ಮನೆಯ ಛಾವಣಿ ಅರ್ಧ ಕಪ್ಪು ಮತ್ತರ್ಧ ಕೆಂಪು ಹೆಂಚಿನದ್ದು. ಇದ್ದ ಒಂದೇ ಒಂದು ಸಣ್ಣಕಿಟಕಿಯಿಂದ ಗಾಳಿ-ಬೆಳಕು ಅಷ್ಟಕ್ಕಷ್ಟೇ! ಉದುರುತ್ತಿದ್ದ ಗೋಡೆಯ ಗಾರೆಪದರುಗಳಿಗೆ ಆಗ್ಗಾಗ್ಗೆ ಮಣ್ಣಿನಲ್ಲಿ ತೇಪೆಹಾಕಿ ಸುಣ್ಣಬಳಿಯುವುದು ನಮ್ಮ ಜೀವನದ ಮೂಲಭೂತ ಕೆಲಸಗಳಲ್ಲೊಂದಾಗಿತ್ತು. ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಚಿಮಣಿಬುಡ್ಡಿಯಲ್ಲಿ ರಾತ್ರಿಯ ಬೆಳಕು. ನಮ್ಮಂತೆ ಅದೆಷ್ಟೋ ಮನೆಗಳೂ ಹಾಗೆಯೇ. ಬೇಸಿಗೆ ದಿನಗಳಲ್ಲಿ ಮನೆಯೊಳಗೆ ವಿಪರೀತ ಕಾವು. ರಾತ್ರಿಹೊತ್ತು ಮನೆಯ ಹೊರಗೆ ಚಾಪೆಹಾಸಿಕೊಂಡು ಸಾಲಾಗಿ ಮಲಗುವುದು ರೂಢಿ. ಆದರೆ ಮನೆ ಎದುರಿದ್ದ ಚರಂಡಿಯಲ್ಲಿ ವಾಸವಿದ್ದ ರಕ್ತಸಂಬಂಧಿ ಸೊಳ್ಳೆಗಳ ಜುಯ್ಗುಟ್ಟುವಿಕೆ ಮತ್ತು ಅವು ಚುಚ್ಚುತ್ತಿದ್ದ ಯಾತನೆಗೆ ಅಲ್ಲಿಯೂ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ನಾವೆಲ್ಲ ಹೊರಗೆ ಮಲಗಿಬಿಟ್ಟರೆ, ಒಳಗಿದ್ದ ಆ ಗಿಳಿಯು ಕೀ... ಕೀ... ಎಂದು ರಾತ್ರಿಯೆಲ್ಲಾ ಕಿರುಚುತ್ತಿತ್ತು. ಅದ್ಯಾವ ಸಂಕಟವೋ ಅದಕ್ಕೆ?

ಬುಧವಾರದ ಸಂತೆಯಲ್ಲಿ ದುಡಿದು ಮೈಯೆಲ್ಲಾ ಹಣ್ಣಾಗಿ ಗುರುವಾರ ರಜೆ ತೆಗೆದುಕೊಳ್ಳುತ್ತಿದ್ದಳು ಅಮ್ಮ. ಆಕೆಯದು ಆ ದಿನವೂ ಮನೆಯಲ್ಲಿ ಸುಮ್ಮನೆ ಕೂರದ ಜೀವ. ಏನಾದರೊಂದು ಕೆಲಸ ಹುಡುಕಿಕೊಂಡು ಮಾಡುತ್ತಿತ್ತು. ಅದೊಂದು ಗುರುವಾರದ ದಿನ ಕೊಳಚೆನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡು ನಾರುತ್ತಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಅಮ್ಮನ ಕೆಲಸಕ್ಕೆ ನನ್ನಕ್ಕ ಮತ್ತು ನಾನು ಕೂಡ ಜೊತೆಯಾದೆವು. ಅಂತೂ ಚರಂಡಿನೀರು ಸರಾಗವಾಗಿ ಹರಿದು ಪಕ್ಕದ ಮಂಗಮ್ಮನ ಮನೆಮುಂದೆ ನಿಂತಿತು. ರೊಚ್ಚಿಗೆದ್ದ ಆಕೆ ಇಬ್ಬರ ಮನೆಯ ನಡುವಿನ ಚರಂಡಿಯಲ್ಲಿ ನಿಂತನೀರಿನ ಮೇಲೆ ಒಂದು ದೊಡ್ಡಕಲ್ಲನ್ನು ಎತ್ತಿಹಾಕಿಬಿಟ್ಟಳು. ನಾವು ಮಾಡಿದಂತೆ ಆಕೆಯೂ ತನ್ನ ಮನೆಮುಂದಿನ ಚರಂಡಿಯನ್ನು ಸ್ವಲ್ಪ ಸ್ವಚ್ಛ ಮಾಡಿಕೊಂಡಿದ್ದರೆ ಏನೊಂದು ಸಮಸ್ಯೆಯೇ ಇರಲಿಲ್ಲ. ಕಲ್ಲು ಎತ್ತಿಹಾಕಿದಾಗ ಚರಂಡಿಯ ಕೊಚ್ಚೆನೀರು ನಮ್ಮ ಮೇಲೆಯೇ ಬಿದ್ದುದು ಅಮ್ಮನಿಗೆ ಕೋಪಬಂದಿರಲಿಲ್ಲವೇನೋ, ಆದರೆ "ನಾವೇನು ನಿಮ್ಮ ಹಾಗೆ ಜಾಡಮಾಲಿಗಳೇ?" ಎಂದ ಮಂಗಮ್ಮ ಆಡಿದ ಜಾತಿ ಕೆಣಕೋ ಮಾತು ಕೇಳಿ ಅಮ್ಮನಿಗೆ ನೆತ್ತಿಗೇರಿದ ಹಾಗಾಯ್ತು. ಶುರುವಾಯ್ತು ಜೋರುಜಗಳ! ಬೀದಿಜನಕ್ಕೆಲ್ಲಾ ಜಗಳ ನೋಡುವುದೊಂದು ಹಬ್ಬ, ಪುಕ್ಕಟೆ ಮನರಂಜನೆ! ಯಾರೂ ಯಾರನ್ನೂ ಬಿಡಿಸುವ ಮಾತೇ ಇಲ್ಲ. ಯಾರ ಪರವಾಗಿಯೂ ಯಾರೂ ವಾದಿಸಲಾರರು. ಅದರಲ್ಲೂ ಮಂಗಮ್ಮನ ವಿರುದ್ಧ ಚಕಾರ ಎತ್ತರು. ಆಕೆಯ ಬಾಯಿಗೆ ಯಾರು ಬಾಯಿಕೊಟ್ಟಾರು? ಆರಡಿ ಎತ್ತರದ ಬಲು ಘಾಟಿಹೆಂಗಸು ಮಂಗಮ್ಮ. ಪ್ರತಿಸ್ಪರ್ಧಿ ತನ್ನಷ್ಟೇ ಜೋರಿದ್ದರೆ ಕೇವಲ ಬೈಗುಳದಲ್ಲೇ ಜಗಳ ನಿಲ್ಲುತ್ತಿತ್ತು, ಇಲ್ಲವಾದರೆ ದೈಹಿಕಹಲ್ಲೆಗೂ ಹಿಂಜರಿಯುತ್ತಿರಲಿಲ್ಲ. ಅಮ್ಮನದೂ ಜೋರುಬಾಯಿಯಾದ್ದರಿಂದ ಜಗಳ ಕೇವಲ ಬೈಗುಳದಲ್ಲಷ್ಟೇ ಮುಗಿಯುತ್ತಿತ್ತು! ಆ ಹೆಂಗಸಿನ ಜಗಳದ ಧಾಟಿ ವಿಕೃತಕ್ಕೆ ತಿರುಗುತ್ತಿದ್ದುದೂ ಹೌದು. ಒಮ್ಮೆ ಹೀಗಾಯ್ತು. ಮಂಗಮ್ಮ ಅದೊಂದು ದಿನ ಬೆಳಗ್ಗೆ ನೆರೆಯಲ್ಲಿದ್ದ ಬಳೆಮಾರುವ ಪೀಚುಕಾಯದ ಹೆಂಗಸಿನೊಂದಿಗೆ ರಂಗೋಲಿಬಿಡುವ ವಿಷಯಕ್ಕೆ ಜಗಳ ತೆಗೆದು ಆಕೆಯನ್ನು ದರದರ ಎಳೆದುಕೊಂಡು ತನ್ನ ಮನೆಯೊಳಗೇ ತಂದು ತನ್ನ ಗಂಡನ ರೂಮಿಗೆ ಸೇರಿಸಿ ಬಾಗಿಲು ಜಡಿದುಬಿಟ್ಟಳು. ಬೀದಿ ಜನವೆಲ್ಲಾ ಅವಾಕ್ಕಾಗಿ ನೋಡುತ್ತಾ ನಿಂತಿತ್ತಷ್ಟೆ! ಇನ್ನೂ ಹಾಸಿಗೆಯಲ್ಲೇ ಬಿದ್ದಿದ್ದ ಆಕೆಯ ಗಂಡ ಪಕ್ಕದಮನೆ ಹೆಂಗಸು ತನ್ನ ಮಂಚದ ಬಳಿ ಅಳುತ್ತಾ ನಿಂತಿದ್ದನ್ನು ನೋಡಿ ಗಾಬರಿಯಾದವನಂತೆ ಬಾಗಿಲು ಬಡಿಯುತ್ತಾ ಕಿರುಚಾಡಲು ನಿಂತಮೇಲೆ ಬಾಗಿಲು ತೆಗೆಯಲಾಗಿ ಅಲ್ಲಿಂದ ಬರೀ ಚೊಣ್ಣದಲ್ಲೇ ಅರೆಬೆತ್ತಲೆಯಾಗಿ ಹೊರಗೆ ಓಡಿಬಂದಿದ್ದ. "ಒಳಗೆ ಹೋಗೋ, ತಂದು ಬಿಟ್ಟಿದ್ದೀನಲ್ಲ ಉಣ್ಣು ಹೋಗು. ಗಂಡಸಲ್ವಾ ನೀನು?" ಎಂದು ಗಂಡನಿಗೆ ವ್ಯಭಿಚಾರದ ಸುಪಾರಿ ಕೊಟ್ಟು ಅವನ ಗಂಡಸ್ತನಕ್ಕೆ ಸವಾಲುಹಾಕುತ್ತಾ ಬೈಯ್ಯಹತ್ತಿದಳು. ಆ ಬಡಪಾಯಿ ಹೆಂಗಸಿನ ಕುಟುಂಬ ಕೆಲವೇ ದಿನಗಳಲ್ಲಿ ಮನೆಖಾಲಿ ಮಾಡಿಕೊಂಡು ಊರುಬಿಟ್ಟು ಹೊರಟುಹೋದರು! ಇಂಥಹ ಬಜಾರಿ ಹೆಂಗಸಿನೊಂದಿಗೆ ಅಮ್ಮ ಜಗಳ ಮಾಡುವುದು ನನಗಂತೂ ಗಾಬರಿ ಹುಟ್ಟಿಸುತ್ತಿತ್ತು.  

ಅಮ್ಮ ಮನೆಯಲ್ಲಿದ್ದ ದಿನಗಳಲ್ಲೇ ಹೀಗೆ ಜಗಳ ಆಗುತ್ತಿತ್ತು ಎಂದು ನನಗನ್ನಿಸುತ್ತದೆ. ಆ ದಿನ ಮಧ್ಯಾಹ್ನ ಪಕ್ಕದ ಬೀದಿಯ ಕೆಂಪಣ್ಣನ ಹೆಂಡತಿ ತಾನಾಗೇ ಜಗಳಕ್ಕೆ ಬಂದಿದ್ದು. ಅಷ್ಟೊಂದು ಪರಿಚಯವಿಲ್ಲದ ಆಕೆ ನೇರವಾಗಿ ಮನೆಯಮುಂದೆ ನಿಂತು "ನೋಡ್ರಪ್ಪಾಏನೆಲ್ಲಾ ಕಳ್ಳತನ ಮಾಡಿರೋದನ್ನ ನೋಡಿದ್ದೀವಿ, ಹಿಂಗೇ ಗಿಳಿಮರೀನೂ ಬಿಡಲ್ವಲ್ಲ ಜನಾ?'' ಎಂದು ಹೊರಗೆ ನಿಂತಿದ್ದ ಅಕ್ಕಪಕ್ಕದ ಮನೆಯವರೆನ್ನೆಲ್ಲಾ ನ್ಯಾಯಕ್ಕೆ ಕರೆಯುವಂತೆ ಜೋರಾಗಿ ಮಾತನಾಡುತ್ತಿದ್ದಾಳೆ. ಇದ್ದಕ್ಕಿದ್ದ ಹಾಗೆ ಮನೆಯಮುಂದೆ ಕೂಗಾಡುತ್ತಿದ್ದ ಹೆಂಗಸನ್ನು ನೋಡಿ ಏನಾಯ್ತೆಂದು ಅಮ್ಮ ಕೇಳಿದಳು. "ನಮ್ಮ ಗಿಳಿಮರಿ ಕದ್ಕೊಂಡು ಬಂದು ಏನಾಯ್ತು ಅಂತ ಕೇಳ್ತೀಯಲ್ಲಮ್ಮಾ, ನಾಚಿಕೊಯಾಗೊಲ್ವೆ ನಿನಗೆ?" ಎಂದ ಆ ಹೆಂಗಸಿನ ಗಂಟಲು ತಾರಕಕ್ಕೇರಿತ್ತು. ಆ ಹೆಂಗಸು ಹೀಗೇಕೆ ಏನೇನೋ ಮಾತನಾಡುತ್ತಿದೆ ಎಂದು ಗೊಂದಕ್ಕೀಡಾದ ಅಮ್ಮ "ನೀವು ಹೇಳ್ತಿರೋದು ಅರ್ಥ ಆಗ್ತಾ ಇಲ್ಲ?" ಅಂತು. ಅದೇನು ಹೊಳೆಯಿತೋ ಆ ಹೆಂಗಸಿಗೆ, ಸೀದಾ ಮನೆಯೊಳಗೇ ನುಗ್ಗಿ "ಎಲ್ಲಿ ನನ್ನ ಗಿಳಿಮರಿ? ಎಲ್ಲಿ ಬಚ್ಚಿಟ್ಟಿದ್ದೀರಿ" ಎಂದು ಮನೆಯಲ್ಲೆಲ್ಲಾ ತಾರಾಮಾರಿ ಅಡ್ಡಾಡಹತ್ತಿತು. ಆಕೆ ಹಿಂದೆಯೇ ಓಡಿದ ಅಮ್ಮ "ಅಯ್ಯೋ ಅದು ನಾವು ಸಾಕಿರೋ ಗಿಳಿ" ಎಂದೆನುತ್ತಾ ಆ ಕ್ಷಣದ ಅನಿರೀಕ್ಷಿತ ಘಟನೆಗೆ ಗಾಬರಿಯಾದಂತೆ, ಮೂಲೆಯಲ್ಲಿ ಸುರುಳಿ ಸುತ್ತಿ ಉದ್ದಕ್ಕೆ ನಿಲ್ಲಿಸಿದ್ದ ಈಚಲು ಚಾಪೆಯ ಮೇಲೆ ಕೂತು ಸದ್ದಿಲ್ಲದೇ ಎಲ್ಲವನ್ನೂ ನೋಡುತ್ತಿದ್ದ ಗಿಳಿಯನ್ನು ಕೈನಲ್ಲಿ ಹಿಡಿದುಕೊಂಡು ಬಂದು ಆಕೆಗೆ ತೋರಿಸಿದ್ದೇ ತಡ ಗಪ್ ಎಂದು ಅಚಾನಕ್ಕಾಗಿ ಒಮ್ಮೆಗೆ ಅದನ್ನು ಕಸಿಯಲು ಕೈ ಹಾಕಿದಳು. ಆ ಹಠಾತ್ ಕ್ರಿಯೆಯನ್ನು ನಿರೀಕ್ಷಿಸದ ಅಮ್ಮ ಗಿಳಿಯನ್ನು ಗಟ್ಟಿಯಾಗಿ ಹಿಡಿದುಬಿಟ್ಟಳು. ಆ ಹೆಂಗಸಿನ ವಿಪರೀತ ಬಲಪ್ರಯೋಗದ ಎಳೆದಾಟದಿಂದಾಗಿ ಗಿಳಿಯ ಒಂದು ಕಾಲಿನ ಮಂಡಿಕೀಲು ಕತ್ತರಿಸಿ ಹೋಗಿ ಅವಳ ಕೈನಲ್ಲಿ ಇನ್ನರ್ಧ ಕಾಲು ಇತ್ತು. ಇಬ್ಬರ ಕೈಗಳೂ ರಕ್ತಸಿಕ್ತವಾದವು. ಅಂದು ಗಿಳಿಯು ಅಷ್ಟು ಕಿರುಚಿದ್ದನ್ನು ನಾನು ಹಿಂದೆಂದೂ ಕೇಳಿದ್ದಿಲ್ಲ! ಅದೆಷ್ಟು ನೋವಾಗಿರಬೇಕು? ತುಂಬಾ ಗಾಬರಿಯಾಗಿ ಅಮ್ಮನ ಕೈನಿಂದ ಬಿಡಿಸಿಕೊಳ್ಳಲು ಒಂದೇಸಮನೆ ಒದ್ದಾಡಲು ಶುರುವಾಯ್ತು. ದಿಗ್ಮೂಢಳಾದಂತೆ ನಿಂತ ಅಮ್ಮ ಕೈಸಡಿಲ ಮಾಡಿಬಿಟ್ಟಳು. ಗಿಳಿಯು ನೆಲಕ್ಕೆ ಒಮ್ಮೆಗೆ ಧೊಪ್ಪನೆ ಬಿದ್ದು ರೆಕ್ಕೆ ಟಪಟಪ ಬಡಿಯುತ್ತ ಒಂಟಿಕಾಲಿನಲ್ಲಿ ಕುಂಟುತ್ತಾ ರಕ್ತಸೋರಿಸಿಕೊಂಡು ಈಚಲುಚಾಪೆಯ ಸಂದಿನೊಳಗೆ ತೂರಿಕೊಂಡಿತು. ಎಲ್ಲವನ್ನೂ ಗಾಬರಿಯಿಂದ ನೋಡುತ್ತಿದ್ದ ಅಕ್ಕ ಮತ್ತು ನಾನು ತಲೆಚಚ್ಚಿಕೊಂಡು ಚಾವಣಿ ಹಾರಿಹೋಗುವ ಹಾಗೆ ಒಂದೇಸಮನೆ ಚೀರಾಡಿದೆವು. ನಮ್ಮ ಗೋಳನ್ನು ನೋಡಿ "ನಿನ್ ಮನೆ ಹಾಳಾಗಿ ಹೋಗಾ, ನನ್ನ ಗಿಳಿಯನ್ನು ಸಾಯಿಸಿಬಿಡ್ತಿದ್ದೀಯಲ್ಲೇ" ಎಂದು ಅಮ್ಮ ಕೂಡ ಗೋಳು ಶುರುಮಾಡಿಕೊಂಡಳು. ಅದೇನನ್ನಿಸಿತೋ ಆ ಹೆಂಗಸು "ಮಾಡ್ತೀನಿ ತಡೀರಿ, ನಿಮ್ಮ ಜನ್ಮಕ್ಕೆ ನನ್ನ ಎಕ್ಕಡ ತುರ್ಕ... ನನ್ನ ಗಿಳಿ ಕಾಲು ಮುರಿದ್ಬಿಟ್ಯಲ್ಲ, ಹಾಳಾದೌಳೆ…! ಮಾಡೋದು ಮಾಡ್ಬಿಟ್ಟು ನೋಡ್ರೋ ಅಂತ ಮನೆಯವರೆಲ್ಲ ಸೋಬಾನೆ ನಾಟಕ ಆಡ್ತೀರಾಕರ್ಕೊಂಡು ಬರ್ತೀನಿ, ನನ್ ಗಂಡ್ಸನ್ನ" ಎಂದು ಹಿಡಿಶಾಪ ಹಾಕುತ್ತ ಆ ಗಿಳಿಯ ಅರ್ಧಕಾಲನ್ನು ಎಸೆದು ಹೊರಟೇಬಿಟ್ಟಿತು. ಇನ್ನೇನು ಘಟಿಸಲಿಕ್ಕಿದೆಯೋ ಎಂದು ನಮಗೆಲ್ಲ ಗಾಬರಿಯಾಯ್ತು!

ಆ ಹೆಂಗಸು ಹೀಗ್ಯಾಕೆ ಬಂದು ಗಲಾಟೆ ಮಾಡಿದಳು? ಆ ಗಿಳಿ ತನ್ನದೆಂದು ಹೇಳುತ್ತಿದ್ದಳೇಕೆ? ನಮಗ್ಯಾರಿಗೂ ಅರ್ಥವಾಗಲಿಲ್ಲ. ಸೇರಿದ್ದ ನೆರೆಯ ಜನಕ್ಕೂ ಇದು ವಿಶಿಷ್ಟ ಜಗಳದಂತೆ ಇತ್ತು. ನಲ್ಲಿ ನೀರು, ಕಸದ ತೊಟ್ಟಿ, ಚರಂಡಿ, ಮನೆ ಮುಂದಿನ ರಂಗೋಲಿ, ಮಕ್ಕಳ ಆಟ ಇನ್ನೇನೇನೋ ವಿಷಯಗಳಿಗೆ ಬೀದಿಯಲ್ಲಿ ಜಗಳ ಆಗುತ್ತಿದ್ದುದು ರೂಢಿ. ಈ ಘಟನೆ ಮಾತ್ರ ಅಲ್ಲಿನೆಲ್ಲರಿಗೂ ವಿಚಿತ್ರವೆನಿಸಿ ಇನ್ನೊಂದು ಮಜಲಿನ ಮನರಂಜನೆಯಂತಾಯ್ತು. ಒಬ್ಬೊಬ್ಬರು ಒಂದೊಂದು ಮಾತನಾಡಲು ಶುರುಹಚ್ಚಿಕೊಂಡರು. "ಆ ಯಮ್ಮ ಕೂಡ ಗಿಳಿ ಸಾಕುತ್ತೆ" ಗುಂಪಿನಲ್ಲಿ ಯಾರೋ ಅಂದರು! ಅಮ್ಮ ಹೇಳಿದಂತೆ ಓಡಿಹೋಗಿ ಎಲ್ಲಿಂದಲೋ ಹಿಡಿ ಕೆಮ್ಮಣ್ಣು ತಂದು ಕೊಟ್ಟೆ. ಮುರಿದ ಆ ಅರ್ಧ ಕಾಲನ್ನು ಮಂಡಿಯ ಕೀಲಿಗೆ ಸರಿಯಾಗಿ ಸಿಕ್ಕಿಸಿ ಬಿಳಿ ಹತ್ತಿಬಟ್ಟೆಯನ್ನು ಕಟ್ಟಿ ಹಸಿ-ಕೆಮ್ಮಣ್ಣು ಸವರುತ್ತಿದಳು. ನಾವು ಬೆರಗುಗಣ್ಣಿನಿಂದ ನೋಡುತ್ತಾ ಕೂತೆವು. "ಕಾಲು ಕೂಡಿಕೊಳ್ಳುತ್ತದೆಯೇ"? ಎಂದಾಗ ಅಮ್ಮ ಸೆರಗಂಚಲ್ಲಿ ಕಣ್ಣು ಒರೆಸಿಕೊಳ್ಳುತ್ತಾ "ಮೂಕಪ್ರಾಣಿ ಕಾಲು ಮುರಿದ್ಲಲ್ಲಾ ಆ ದರಿದ್ರಮುಂಡೆಗೆ ನರಕಾನೇ ಗಟ್ಟಿ, ಯಮ ಅವಳ ಕಾಲನ್ನು ಹೀಗೆ ಕಿತ್ತುಬಿಸಾಕ್ತಾನೆ" ಎಂದು ಒಂದಷ್ಟು ಹಿಡಿಶಾಪ ಹಾಕಿದಳೇ ಹೊರತು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಆಕೆಯ ಶಾಪದ ಮಾತು ನನ್ನ ಜಂಘಾಬಲವನ್ನೇ ಉಡುಗಿಸಿಬಿಡ್ತು. "ಯಮ ನಿಜವಾಗಿಯೂ ಹಾಗೆ ಮಾಡ್ತಾನ"? ಕೇಳಿದೆ. "ಹೌದು ನೀನು ಯಾರಿಗೆ ಏನು ಹಿಂಸೆ ಮಾಡ್ತೀಯೋ ಅದನ್ನೇ ಅವ್ನು ನಿನಗೆ ಮಾಡ್ತಾನೆ"! ಎಂದು ಬಿಕ್ಕುತ್ತಾ ಮಡಿಲಲ್ಲಿದ್ದ ಗಿಳಿಯ ತಲೆಯನ್ನು ನೇವರಿಸುತ್ತಾ ಕೂತಳು. "ಯಾವ ಪ್ರಾಣಿಗೆ ಹಾಗೆ ಮಾಡಿದರೂ ನಮಗೆ ಶಿಕ್ಷೆ ಆಗುತ್ತಾ"? ಕತ್ತೆತ್ತಿ ನನ್ನ ಮುಖ ನೋಡಿ ಹೌದೆಂದು ತಲೆಯಾಡಿಸಿದಳು. ಚಿಕ್ಕ ವಯಸ್ಸಿನಲ್ಲಿ ಚಿಟ್ಟೆಗಳನ್ನು ಹಿಡಿದು ಅದರ ತಿಕಕ್ಕೆ ಕಡ್ಡಿ ಚುಚ್ಚುತ್ತಿದ್ದ ಒಬ್ಬ ಋಷಿಗೆ ಜೀವನಪೂರ್ತಿ ಅವನ ಅಂಡಿಗೆ ಮೊಳೆ ಸಿಕ್ಕಿಕೊಂಡಿತ್ತಂತೆ. ಪ್ರಾಣಿಹಿಂಸೆ ಮಾಡಿದ್ದಕ್ಕೆ ಅವನಿಗೆ ನರಕ ದರ್ಶನವಾಯ್ತನಂತೆ ಎಂದೆಲ್ಲ ಏನೇನೋ ಕಥೆ ಹೇಳಿ ಮತ್ತಷ್ಟು ಗಾಬರಿ ಮಾಡಿಟ್ಟಳು. ನನಗೀಗ ಗಿಳಿಯ ವಿಷಯ ಕ್ಷುಲ್ಲಕದಂತಾಗಿ ನಾವು ಹುಡುಗರೆಲ್ಲ ಸೇರಿ ಮಾಡ್ತಿದ್ದ ಪ್ರಾಣಿ ಹಿಂಸೆಯ ಸ್ವರೂಪಗಳು ಕಣ್ಣಮುಂದೆ ಹಾದು ಹೋಗುತ್ತಿತ್ತು. ನಾವು ಡ್ರಾಗನ್ ಚಿಟ್ಟೆಗಳನ್ನು ಹಿಡಿದು ಅದರ ಬಾಲಕ್ಕೆ ದಾರಕಟ್ಟಿ ಚಿನ್ನಪ್ಪನ ಹಿತ್ತಲಲ್ಲಿದ್ದ ಹೊಂಡಕ್ಕೆ ಇಳಿಬಿಟ್ಟು ಕಪ್ಪೆಯು ಎಗರಿ  ಚಿಟ್ಟೆಯನ್ನು ಹಿಡಿದಾಗ ಗಾಳಕ್ಕೆ ಸಿಕ್ಕ ಮೀನಿನಂತೆ ಅದನ್ನು ಹೊರಗೆ ಎಳೆದು ಹಿಡಿದುಕೊಳ್ಳುತ್ತಿದ್ದೆವು. ದೊಡ್ಡಪೇಟೆ ಶಾಲೆಯಲ್ಲಿ ಎಂಕ್ಟಪ್ಪ ಮೇಷ್ಟ್ರು ಕಪ್ಪೆ ಕುಯ್ದು ಅದರ ದೇಹಭಾಗಗಳನ್ನು ನಮಗೆ ಪರಿಚಯಿಸುತ್ತಿದ್ದ ಹಾಗೆಯೇ ನಾವು ಕೂಡ ಕಪ್ಪೆಯನ್ನು ಅಂತರಕ್ಕೆ ಮಲಗಿಸಿ ಅದರ ನಾಲ್ಕುಕಾಲಿಗೆ ಮೊಳೆಹೊಡೆದು ಬ್ಲೇಡಿನಲ್ಲಿ ಅದರ ಮಧ್ಯಭಾಗ ಕುಯ್ದು ದೇಹವನ್ನೆಲ್ಲ ಜಾಲಾಡಿ ಕೊನೆಗೆ ಸೂಜಿದಾರದಿಂದ ಹೊಲೆದು ಮತ್ತೆ ಹೊಂಡದಲ್ಲೇ ಬಿಡುತ್ತಿದ್ದೆವು. ನನಗೆ ನರಕದಲ್ಲಿ ಎಂತೆಂತಹ ಶಿಕ್ಷೆ ಕಾದಿದೆಯೋ ಎಂದು ಒಳಗೊಳಗೇ ಭಯಗೊಂಡು ಮುದುರಿಹೋಗಿದ್ದೆ! "ಮಕ್ಕಳಾಟಕ್ಕೆಲ್ಲಾ ಶಿಕ್ಷೆ ಕೊಡ್ತೀಯಾ? ಎಂದು ಯಮನಿಗೇ ನರ್ಮನ್ಸ ಆಗಿ ನೀನು ಭೂಮೀಲಿ ಹುಟ್ಟು ಅಂತ ಶಾಪ ಕೊಟ್ಬುಟ್ನಂತೆ ಆ ಋಷಿ. ಆಗಿಂದ ಮಕ್ಳು ಮಾಡಿದ ತಪ್ಪಿಗೆ ಶಿಕ್ಷೆ ಇಲ್ವಂತೆ. ಆದ್ರೆ ಅದ್ರ ಬದ್ಲು ಅವ್ರ ಅಪ್ಪ-ಅಮ್ಮನಿಗೆ ಆ ಶಿಕ್ಷೆ ಅಂತೇ"! ನಾನು ಗಾಬರಿಯಿಂದ ಕೆಣಕಿ-ಕೆಣಕಿ ಕೇಳುತ್ತಿದ್ದದ್ದನ್ನ ಅರ್ಥ ಮಾಡಿಕೊಂಡು ಅಮ್ಮ ಹೀಗೆ ಸಮಾಧಾನದ ಕಥೆಯ ಉತ್ತರ ಕೊಟ್ಟಳೇನೋ ಸರಿ ಆದರೆ ನಾವು ಮಾಡಿದ ತಪ್ಪಿಗೆ ಅಪ್ಪ-ಅಮ್ಮನಿಗೆ ಯಾಕೆ ಶಿಕ್ಷೆ? ಎನ್ನುವ ಮತ್ತಷ್ಟು ಗೊಂದಲ ಶುರುವಾಯ್ತು.

ಕಂದು-ಕಪ್ಪು ಮಿಶ್ರ ಬಣ್ಣದ ರಾಣಿ ಅಂತಹ ಜಾತಿ ನಾಯಿಯೇನೂ ಆಗಿರಲಿಲ್ಲ. ಆದರೂ ಆರೇಳು ವರ್ಷದಿಂದ ನಮ್ಮ ಮನೆಯ ಸದಸ್ಯಳೊಬ್ಬಳೇ ಆಗಿದ್ದಳು. ತಲೆಯ ಮೇಲೆ ಹರವಾದ ಬಿದಿರು ಬುಟ್ಟಿಯಲ್ಲಿ ಬಣ್ಣ-ಬಣ್ಣದ ಕೋಳಿಪಿಳ್ಳೆಗಳನ್ನು ಬೀದಿಮೇಲೆ ಮಾರಲು ಬರುವ ಒಬ್ಬನಿದ್ದ. ನಾನು ೧೦ ಪೈಸೆ ಕೊಟ್ಟು ಪಡೆದ ಲಾಟರಿ ಟೋಕನ್ನಿಗೆ ಎರಡು ರೂಪಾಯಿ ಬೆಲೆಯ ಗುಲಾಬಿ ಬಣ್ಣದ ಕೋಳಿಪಿಳ್ಳೆ ಬಹುಮಾನವಾಗಿ ಬಂದದ್ದನ್ನು ಜತನವಾಗಿ ಕಾಪಾಡಿ, ಮೇಯಿಸಿ ಮೈತುಂಬಿದ ಹುಂಜನನ್ನಾಗಿ ಮಾಡಿದ್ದುದು ಸುಲಭವೇನೋ ಆಗಿರಲಿಲ್ಲ. ಇತರೆ ಬೀದಿನಾಯಿಗಳ ಹಾಗೆ ರಾಣಿ ಯಾವತ್ತೂ ಹುಂಜನನ್ನು ಕಬಳಿಸುವ ಪ್ರಯತ್ನ ಮಾಡಿರಲಿಲ್ಲ. ಗಿಳಿಯನ್ನೂ ಕೂಡ ಮೂಸಿನೋಡಿ ಸುಮ್ಮನೆ ಹೋಗುತ್ತಿತ್ತು ಅಷ್ಟೇ. ಈ ತೀಟೆ ಗಿಳಿಯೇ ರಾಣಿಯ ಮೂತಿಯನ್ನು ಕುಕ್ಕುತ್ತಿತ್ತು, ಆಗ ರಾಣಿ ಕುಯ್ ಎಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಿತ್ತು! ‘ಕೀ...ಕೀ...ಕೂಗಿನ ಹೊರತು ಮತ್ತೇನನ್ನೂ ಮಾತನಾಡಿದ ಗಿಳಿಯಲ್ಲ ಅದು! ಗಿಳಿಗೆ ಬಹುಶಃ ಎರಡು ವರ್ಷವಾದರೂ ಆಗಿರಬೇಕು. ಎಲ್ಲಮ್ಮ ದೇವಸ್ಥಾನದ ಆಲದಮರದ ಕೆಳಗೆ ಬಿದ್ದು ಕಿರುಚುತ್ತಿದ್ದ, ತಿಂಗಳೂ ತುಂಬದ ಪುಟ್ಟಮರಿಯನ್ನು ಅಂಗೈನಲ್ಲಿ ಜತನವಾಗಿ ಹಿಡಿದು ತಂದಿದ್ದು ನನಗೆ ನೆನಪಿದೆ. ಆ ಹೆಂಗಸು ನಮ್ಮ ಮರಿ ಎಂದು ಹೇಗೆ ಹೇಳಲು ಸಾಧ್ಯ? ರೆಕ್ಕೆ-ಪುಕ್ಕ ಬಲಿತ ಮೇಲೆ ಆಗಾಗ ಹೊರಗೆ ಹಾರಿ ಹೋಗುತ್ತಿತ್ತು. ಅದ್ಯಾವುದೋ ಘಳಿಗೆಯಲ್ಲಿ ಮತ್ತೆ ಗುಮ್ಮನಂತೆ ಹಾರಿ ಬಂದು ಈಚಲು ಚಾಪೆಯ ಮೇಲೆ ಕೂತಿರುತ್ತಿತ್ತು. ಅದ್ಯಾಕೆ ಈ ಪಕ್ಷಿ ಹಾರಿ ತನ್ನ ಸಮುದಾಯವನ್ನು ಸೇರಿಕೊಳ್ಳುತ್ತಿರಲಿಲ್ಲವೋ? ನನಗೆ ದೊಡ್ಡ ಪ್ರಶ್ನೆ. ಅಥವಾ ಚಿಕ್ಕಂದಿನಿಂದ ಇಲ್ಲೇ ಬೆಳೆದು ಈಗ ತನ್ನಷ್ಟಕ್ಕೆ ತಾನೇ ಬದುಕುವುದು ಕಷ್ಟವಾಗಿರಬೇಕು! ಆಗಾಗ ಅದೆಲ್ಲಿ ಹಾರಿಹೋಗಿ ಬರುತ್ತಿತ್ತೋ ಕಾಣೆ? ಬಹುಶಃ ಆ ಹೆಂಗಸಿನ ಮನೆಗೆ ಹೋಗಿ ಬರುತ್ತಿದ್ದಿರಬೇಕು. ಅವರು ಇದನ್ನು ತಮ್ಮದೆಂದು ಹಚ್ಚಿಕೊಂಡಿರಬೇಕು. ತುಂಬಾ ದಿನವಾದರೂ ಬಾರದ ಅದನ್ನು ಇಲ್ಲಿ ನೋಡಿ ಜಗಳಕ್ಕೆ ಬಂದಿರಬೇಕು. ಕಾಲು ಸರಿಹೋಗಲಿ, ಮೊದಲು ಇದರ ರೆಕ್ಕೆಯಂಚನ್ನು, ಪುಕ್ಕವನ್ನು ಕತ್ತರಿಸಿ ಹಾಕುತ್ತೇನೆ. ಅದು ಹೇಗೆ ಹಾರಿ ಹೋಗುತ್ತೋ ನೋಡ್ತೀನಿ? ಎಂದೆಲ್ಲಾ ಯೋಚಿಸಿದ್ದೂ ನಿಜ.

ಬೀದಿಯಲ್ಲಿ ಕೋಳಿಕಳ್ಳರು ಹೆಚ್ಚಾಗಿ ನಮ್ಮ ಹುಂಜನನ್ನು ಕಾಪಾಡಿಕೊಳ್ಳುವುದು ದುಸ್ತರವಾಗುತ್ತಿತ್ತು. ಅಪ್ಪನಂತೂ "ಕುಯ್ದು ಎಸರು ಮಾಡ್ಬಿಡು" ಎನ್ನುತ್ತಿದ್ದ. ಮೊದಲಿಗೆ ನಾನು ಪ್ರತಿರೋಧ ತೋರುತ್ತಿದ್ದೆನಾದರೂ ಸಂದರ್ಭದ ಅರಿವಾಗಿ ಸುಮ್ಮನಾದೆ. ಒಂದು ದಿನ ಅಮ್ಮ ಬೆಳಗ್ಗೆ ಅಂಗಡಿಗೆ ಹೋಗುವ ಮೊದಲು ಹುಂಜನನ್ನು ಕೊಯ್ದು ಅರಿಶಿನ-ಈರುಳ್ಳಿ ಹಾಕಿ ಬೇಯಿಸಿತ್ತು. ಸಂಜೆ ಬಂದು ಎಸರು ಮಾಡುವುದು ಎಂದಿತ್ತು. ನಾವೆಲ್ಲರೂ ಮನೆಗೆ ಬೀಗ ಹಾಕಿಕೊಂಡು ಶಾಲೆಗೆ ಹೋಗಿ ವಾಪಾಸ್ ಬಂದಾಗಲೇ ಗೊತ್ತಾಗಿದ್ದು ರಾಣಿಯನ್ನು ಮನೆಯೊಳಗೇ ಕೂಡಿಹಾಕಿ ಹೋಗಿದ್ದೆವೆಂದು! ಕೋಳಿ ಮಾಂಸದ ತಪ್ಪಲೆ ನೆಲಕ್ಕೆ ಬಿದ್ದಿತ್ತು. ಜಗಿದು ಹೀರಿ ಹಾಕಿದ ಮಾಂಸದ ತುಣುಕುಗಳು, ಮತ್ತೊಂದಷ್ಟು ಮೂಳೆಗಳು ಮನೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದ ರಣರಂಗ ಸದೃಶ ನೋಟ! ಈಚಲು ಚಾಪೆ ಮೇಲೆ ಕೂತು ಇದನ್ನೆಲ್ಲಾ ಗಮನಿಸಿದ್ದ ಗಿಳಿ ನಾವು ಒಳಗೆ ಬಂದೊಡನೆ ಗಾಬರಿಯಿಂದಲೇ ಕೀ..ಕೀ.. ಎಂದು ಕಿರುಚುತ್ತಾ ರಾಣಿಯ ಮೇಲೆ ದೂರನ್ನಿತ್ತಿತು. ರಾಣಿ ಗಿಳಿಯ ಕಡೆ ನೋಡಿ ರೇಗಿದಂತೆ 'ಬೌ' ಎಂದು ಬೈದು ಅಲ್ಲಿಂದ ಓಟಕಿತ್ತಿತು. ಕೊನೆಗೂ ಆ ಹುಂಜ ರಾಣಿಯ ಪಾಲಾಯ್ತು! ಒಮ್ಮೆ ಎದುರು ಮನೆ ಮೂಗ ಸಾಕಿದ್ದ ಪರಿವಾಳವನ್ನೂ ಹಿಡಿದು ತಿಂದಿತ್ತು. ಪ್ರತೀಕಾರಕ್ಕೆ ರಾಣಿ ಕಂಡಲ್ಲೆಲ್ಲ ಕಲ್ಲನ್ನು ರೊಯ್ಯನೆ ಬೀಸುತ್ತಿದ್ದ ಅವ. ಅವನ ಭಾಷೆಯಲ್ಲೇ ಬೈಯುತ್ತಾ ಅವನೊಡನೆ ಅದೆಷ್ಟೋ ಬಾರಿ ಬೀದಿಯಲ್ಲಿ ಜಗಳಕ್ಕೆ ಬಿದ್ದಿದ್ದೇನೆ! ಆದರೂ ರಾಣಿ ಎಂದೂ ಏಕೆ ಗಿಳಿಯನ್ನು ಮುಟ್ಟುವ ಪ್ರಯತ್ನ ಮಾಡಿರಲಿಲ್ಲ?! ಮನೆ ಸದಸ್ಯರು ಜೀವಂತವಾಗಿದ್ದಾಗ ಬಾಯಿಹಾಕಬಾರದೆಂಬ ವಿಚಿತ್ರ ತರ್ಕದ ತಿಳುವಳಿಕೆಯೇನೋ ಅದಕ್ಕೆ? "ತನ್ನ ಗಂಡನನ್ನು ಕರೆದುಕೊಂಡು ಬರ್ತೀನಿ ಎಂದು ಹೋಗಿದ್ದಾಳೆ ಕೆಂಪಣ್ಣನ ಹೆಂಡತಿ, ಇನ್ನು ಅದೇನು ಜಗಳ ಮಾಡ್ಬೇಕೋ... ಅದೇನ್ ಕಥೆಯೋ? ಹೋಗಿ ನಿಮ್ಮಪ್ಪನನ್ನ ಕರೆದುಕೊಂಡು ಬಾ ಎಂದು ನನ್ನನ್ನು ಪೇಟೆಗೆ ಕಳುಹಿಸಿದಳು. ವಿಷಯದ ಗಂಭೀರತೆ ತಿಳಿದು ಅಪ್ಪ ಕೂಡ ಬಂದ. ಗಿಳಿಯ ಆ ಸ್ಥಿತಿ ನೋಡಿ ಮರುಗಿ "ನಾಯಿ, ಬೆಕ್ಕು, ಮೊಲ, ಗುಬ್ಬಿ, ಅಳಿಲು, ಕೋಳಿ, ಗಿಳಿ ಎಲ್ಲಾ ಸಾಕಿ ಆಯಿತು, ಇನ್ನು ಹಾವೊಂದು ಬಾಕಿ ಇದೆ! ನಿಮ್ಮನ್ನು ಸಾಕೋದೆ ಸಾಕಾಗಿದೆ, ಇನ್ನು ಇವು ಬೇರೆ" ಎಂದು ರೇಗಿದ.

ಅದಾಗಲೇ ಸಂಜೆಸೂರ್ಯ ಮುಳುಗೋ ಹೊತ್ತು. ಹೊರಗೆ "ರಂಗಣ್ಣಾ… ಮನೇಲಿದ್ದಿಯಾ"? ಎಂದು ಕೂಗಿದ ಧ್ವನಿ. ಕೆಂಪಣ್ಣ, ಆತನ ಹೆಂಗಸು ಮತ್ತು ಐದಾರು ವರ್ಷದ ಅವರ ಮಗಳು ಮನೆ ಮುಂದೆ ಬಂದು ನಿಂತಿದ್ದರು. ಆ ಹುಡುಗಿಯ ಕೈನಲ್ಲಿ ಒಂದು ಗಿಳಿಮರಿ ಇತ್ತು. ಕೆಂಪು ಚುಂಚದ ಹಸಿರು ಹಕ್ಕಿ ನೋಡಲು ತುಂಬಾ ಚೆಂದವಿತ್ತು. ಭೀತಿಗೊಂಡಿದ್ದ ನಾವೆಲ್ಲಾ ಆ ದೃಶ್ಯ ನೋಡುತ್ತಾ ಅವಕ್ಕಾಗಿ ನಿಂತುಬಿಟ್ಟೆವು. "ನಮ್ಮನ್ನು ಕ್ಷಮಿಸಿಬಿಡು ತಾಯೀ, ದೊಡ್ಡ ತಪ್ಪಾಗೋಗಿದೆ" ಎಂದು ಕೈಜೋಡಿಸಿ ಗದ್ಗದಿತನಾಗಿ ಮುಖ ಇಳಿಬಿಟ್ಟು ನಿಂತುಬಿಟ್ಟ ಕೆಂಪಣ್ಣ. "ಥೇಟ್ ಇದೇ ಥರದ ಮರಿ ನಮ್ಮದೂ, ನಿನ್ನೆಯಿಂದ ಪತ್ತೆಯಿರಲಿಲ್ಲ. ತುಂಬಾ ಹೆದರಿ ಅಟ್ಟದ ಮೇಲೆ ಸೌದೆಯ ಸಂದಿಯಲ್ಲಿ ಅವುಚಿಕೊಂಡು ಕೂತುಬಿಟ್ಟಿತ್ತು! ಬಹುಶ ಯಾವುದೋ ಕಳ್ಳಬೆಕ್ಕು ಬಂದಿತ್ತೇನೋ? ಸ್ವಲ್ಪ ಕೂಗಿ ಮಾತನಾಡಿಯೂ ಇಲ್ಲ ಬೇವರ್ಸಿದು! ಆ ಮಂಗಮ್ಮ ಹೇಳಿದ್ದು, ನಮ್ಮ ಗಿಳಿಮರಿ ನಿಮ್ಮ ಮನೇಲಿದೆ ಅಂತ. ನನಗೂ ಬುದ್ಧಿ ಕೆಟ್ಟೋಗಿತ್ತು, ತುಂಬಾ ತಪ್ಪಾಗೋಯ್ತು! ಪಾಪದ ಹಕ್ಕಿ ಕಾಲನ್ನು ಮುರಿದ ನನ್ನ ಕಾಲು ಉಳಿತೈತ? ತಗೊಳ್ಳಿ ಈ ಮರೀನೂ ನೀವೇ ಸಾಕ್ಕೊಂಬಿಡಿ, ನನ್ನ ಪಾಪ ಸ್ವಲ್ಪ ಕಳೀಲಿ. ಇವನ್ನು ಸಾಕೋ ಯೋಗ್ಯತೆ ನಮಗೆಲ್ಲೈತೆ?" ಆ ಹೆಂಗಸು ಬಿಕ್ಕುತ್ತಾ ಅಲವತ್ತುಕೊಳ್ಳುತ್ತಿತ್ತು. ಅಮ್ಮ ಏನೊಂದೂ ಮಾತನಾಡದೆ ಸೆರಗ ತುದಿಯನ್ನು ಬಿಗಿಯಾಗಿ ಕಚ್ಚಿ ಹಿಡಿದು ತಾನೂ ಬಿಕ್ಕುತ್ತಾ ನಿಂತುಬಿಟ್ಟಳು!      

ಮಂಜುನಾಥ ಕುಣಿಗಲ್

ಫ್ಲಾಟ್ ಬಿ-702, ಫೌಂಡೇಶನ್ ಸಿಲ್ವರ್ ಸ್ಪ್ರಿಂಗ್ಸ್

ಹೂಟಗಳ್ಳಿ, ಮೈಸೂರು

ಫೋ – 7899315930